ಗ್ರಂಥಾಲಯ 2018-08-09T11:04:34+00:00

ಗ್ರಂಥಾಲಯ

ಸಂಶೋಧನ ಕೇಂದ್ರ ಪ್ರಾರಂಭವಾದ ಮೇಲೆ ಕೇಂದ್ರವು ಪುಸ್ತಕ ಸಂಗ್ರಹದ ಕಡೆಗೆ ಹೆಚ್ಚು ಮುತುವರ್ಜಿ ವಹಿಸಿದೆ. ಸಂಶೋಧನ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗುವ ಉದ್ದೇಶದಿಂದ ಗ್ರಂಥ ಸಂಗ್ರಹಕ್ಕೆ ಆದ್ಯತೆ ನೀಡಲಾಯಿತು. ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಸಂದರ್ಶಿಸಿ ಅಲ್ಲಿಯ ಪ್ರಸಾರಾಂಗದಿಂದ ಪ್ರಕಟಿಸಿದ ಗ್ರಂಥಗಳನ್ನು, ಈ ನಾಡಿನ ಪ್ರತಿಷ್ಠಿತ ಪ್ರಕಟಣಾ ಸಂಸ್ಥೆಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿ ಪ್ರಕಟವಾದ ಕೇಂದ್ರಕ್ಕೆ ಅವಶ್ಯವಿರುವ ಪೂರಕ ಗ್ರಂಥಗಳನ್ನು ಖರೀದಿಸಿ, ಸಂಗ್ರಹಿಸಲಾಯಿತು. ಅಷ್ಟೇ ಅಲ್ಲದೇ ಮಠಮಾನ್ಯಗಳ ಪ್ರಕಟಣಾ ವಿಭಾಗದಿಂದ ಗ್ರಂಥಗಳನ್ನು ಖರೀದಿಸಲಾಯಿತು. (ಗದುಗಿನ ತೋಂಟದಾರ್ಯ ಮಠ, ಮುಂಡರಗಿ ಅನ್ನದಾನೇಶ್ವರ ಮಠ, ಸುತ್ತೂರು ಸಂಸ್ಥಾನ ಮಠ ಮುಂತಾದವುಗಳು). ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಅಲ್ಲಿ ಹಾಕಿದ ಪುಸ್ತಕ ಮಳಿಗೆಗಳಿಂದ ಗ್ರಂಥಗಳನ್ನು ಖರೀದಿಸಲಾಯಿತು. ವಿಶೇಷವಾಗಿ ಕನ್ನಡ ವಿಶ್ವವಿದ್ಯಾಲಯ, ಹಂಪಿ ಪ್ರಸಾರಾಂಗ ಪ್ರಕಟಿಸಿದ ಪ್ರಕಟಣೆಗಳನ್ನು ಖರೀದಿಸಲಾಗಿದೆ. ಹೀಗೆ ಈ ಗ್ರಂಥಾಲಯ ಅಲ್ಪಾವಧಿಯಲ್ಲಿ ಬೆಳವಣಿಗೆಯಾದುದನ್ನು ನೋಡಿದ ಹಲವಾರು ವಿದ್ವಾಂಸರು ತಮ್ಮ ಸಂಗ್ರಹದಲ್ಲಿರುವ ಅತ್ಯುತ್ತಮ ಗ್ರಂಥಗಳನ್ನು ಕೇಂದ್ರಕ್ಕೆ ಉದಾರವಾಗಿ ನೀಡಿದರು. ಹೀಗಾಗಿ ಗ್ರಂಥಾಲಯದಲ್ಲಿ ಸುಮಾರು 11,000 ಗ್ರಂಥಗಳ ಸಂಗ್ರಹವಾಗಿದೆ. ನಾಡಿನ ಹಲವಾರು ಸಂಘಟನೆಗಳು ಪ್ರಕಟಿಸುತ್ತಿರುವ ನಿಯತಕಾಲಿಕೆಗಳನ್ನು ತರಿಸಲಾಗುತ್ತಿದೆ. (ಲಿಂಗಾಯತ, ಶರಣ ಚೇತನ, ಶಿವಾನುಭವ, ವೀರಶೈವ ವಾಣಿ ಮುಂತಾದವುಗಳು) ಸಂಶೋಧನ ವಿದ್ಯಾರ್ಥಿಗಳ ಅಧ್ಯಯನಕ್ಕೆ ಆಕರ ಗ್ರಂಥಗಳಾಗಲು ಅಪಾರವಾಗಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ.