ಡಾ. ಫ. ಗು. ಹಳಕಟ್ಟಿ 2018-07-31T06:13:05+00:00

ಡಾ. ಫ. ಗು. ಹಳಕಟ್ಟಿ

ವಚನ ಪಿಚಿತಾಮಹ ಡಾ. ಫ. ಗು. ಹಳಕಟ್ಟಿ

ಡಾ. ಫಕೀರಪ್ಪ ಹಳಕಟ್ಟಿಯವರು 1880ರ ಜುಲೈ 2 ರಂದು, ಗುರುಬಸಪ್ಪ ಹಾಗೂ ದಾನಮ್ಮ ದಂಪತಿಗಳಿಗೆ ಜನಿಸಿದರು. ಹಳಕಟ್ಟಿಯವರು ತಮ್ಮ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಪಡೆದರು. 1902ರಲ್ಲಿ ಮುಂಬೈನ ಸೆಂಟ್ ಝೇವಿಯರ್ ಕಾಲೇಜಿನಿಂದ ಬಿ.ಎ. ಪರೀಕ್ಷೆ ಮುಗಿಸಿದರು.

ಸಾರ್ವಜನಿಕ ಸೇವಾ ಅಭಿಲಾಷೆಯನ್ನು ಹೊಂದಿದ್ದ ಪೂಜ್ಯ ಹಳಕಟ್ಟಿಯವರು ಬಿ.ಎ. ಉತ್ತೀರ್ಣರಾದ ನಂತರ ತಮಗೆ ದೊರೆತ ಉದ್ಯೋಗಾವಕಾಶಗಳನ್ನು ತೊರೆದು 1904ರಲ್ಲಿ ಎಲ್.ಎಲ್.ಬಿ. ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ಪೂರ್ಣಗೊಳಿಸಿದರು. ಅದೇ ವರ್ಷ ಬಿಜಾಪುರಕ್ಕೆ (ಈಗಿನ ವಿಜಯಪುರ) ವಕೀಲ ವೃತ್ತಿಗಾಗಿ ಆಗಮಿಸಿದ ಹಳಕಟ್ಟಿಯವರು ವಚನ ಸಂಗ್ರಹಕ್ಕೆ ತಮ್ಮನ್ನು ತೊಡಗಿಸಿಕೊಂಡರು. ಬಸವಾದಿ ಶರಣರ ವಚನಗಳು ಅಮೂಲ್ಯವಾದುದು ಎಂದು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಟ್ಟರು.

ಆ ಮೊದಲೇ ಅವರು ಶಿವಲಿಂಗಪ್ಪ ಮಂಚಾಲೆಯವರ ಮನೆಯಲ್ಲಿ ‘ಷಟ್ಸ್ಥಲ ತಿಲಕ’ ಮತ್ತು ‘ಪ್ರಭುದೇವರ ವಚನ’ಗಳ ತಾಳೆಗರಿಗಳನ್ನು ನೋಡಿ ಆಕರ್ಷಿತರಾಗಿದ್ದರು. ವಿಶೇಷವಾಗಿ ತಾಡೋಲೆ ಹಸ್ತಪ್ರತಿಗಳು ಅವರ ಮನಸ್ಸನ್ನು ಆಕರ್ಷಿಸಿದ್ದವು.’ ಅವರು ಅತ್ಯಂತ ಕಾಳಜಿ ಪೂರಕವಾಗಿ ವಚನಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ, ಮುದ್ರಿಸಿ ಜನಸಾಮಾನ್ಯರಿಗೆ ತಲುಪಿಸುವ ಸಂಕಲ್ಪ ಮಾಡಿದರು. ವಕೀಲ ವೃತ್ತಿಯ ಜೊತೆ-ಜೊತೆಗೆ ತಾವು ಸಂಗ್ರಹಿಸಿದ ರಾಶಿ-ರಾಶಿ ವಚನಗಳನ್ನು ಮುದ್ರಿಸುವ ಸಂಕಲ್ಪ ತೊಟ್ಟು 1925ರಲ್ಲಿ ಹಿತಚಿಂತಕ ಮುದ್ರಣಾಲಯವನ್ನು ಪ್ರಾರಂಭಿಸಿದರು.

ಮುದ್ರಣ ಯಂತ್ರ ಖರೀದಿಸಲು ಆರ್ಥಿಕ ತೊಂದರೆ ಉಂಟಾಯಿತು. ತಮ್ಮ ದುಡಿಮೆಯಿಂದ ಕಟ್ಟಿಸಿದ ಮನೆಯನ್ನು ಮಾರಾಟ ಮಾಡಿದರು. ವಚನ ಸಂಗ್ರಹಕ್ಕೆ ಅವರು ತೊಟ್ಟ ದೀಕ್ಷೆಗೆ ಇದು ಒಂದು ನಿದರ್ಶನ. ‘ಹಿತಚಿಂತಕ’ ಮುದ್ರಣಾಲಯದಲ್ಲಿ ಶರಣರ ವಚನಗಳನ್ನು ಪ್ರಕಟಿಸಲು 1926ರಲ್ಲಿ ಶಿವಾನುಭವ ಪತ್ರಿಕೆಯನ್ನು ಹಾಗೂ ಶಿವಾನುಭವ ಗ್ರಂಥಮಾಲೆಯನ್ನು ಹುಟ್ಟುಹಾಕಿದರು.

1927ರಲ್ಲಿ “ರಾಜಕೀಯ, ಸಾಮಾಜಿಕ, ಔದ್ಯೋಗಿಕ, ಶೈಕ್ಷಣಿಕ” ಮುಂತಾದ ವಿಷಯಗಳನ್ನು ಒಳಗೊಂಡ ‘ನವಕರ್ನಾಟಕ’ ವಾರ ಪತ್ರಿಕೆಯನ್ನು ಆರಂಭಿಸಿದರು. ಹಳಕಟ್ಟಿಯವರ ಸಾಹಿತ್ಯ ಸೇವೆಯನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ 1953ರ ನವೆಂಬರ್ ತಿಂಗಳಲ್ಲಿ “ಡಾಕ್ಟರ್ ಆಫ್ ಲೆಟರ್ಸ್” ಪದವಿಯನ್ನು ನೀಡಿತು.

1910ರಲ್ಲಿ ಹಳಕಟ್ಟಿಯವರು ಬಿಜಾಪುರದಲ್ಲಿ ಬಿ.ಎಲ್.ಡಿ.ಇ. ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಬಿಜಾಪುರ ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ಭದ್ರವಾದ ಅಡಿಪಾಯವನ್ನು ಹಾಕಿದರು.
ಡಾ. ಫ.ಗು. ಹಳಕಟ್ಟಿಯವರು 115ಕ್ಕೂ ಹೆಚ್ಚಿನ ಸಂಖ್ಯೆಯ ಅಮೂಲ್ಯ ಗ್ರಂಥಗಳನ್ನು ಪ್ರಕಟಿಸಿದರು.

1926ರಲ್ಲಿ ಬಳ್ಳಾರಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿ ನೀಡಿ ಅವರನ್ನು ಸನ್ಮಾನಿಸಲಾಯಿತು. 1956ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಡಿ. ಲಿಟ್. ಪದವಿ ನೀಡಿ ಪುರಸ್ಕರಿಸಿತು. 1964ರಲ್ಲಿ, 84 ವರ್ಷ ವಯಸ್ಸಿನ ಹಳಕಟ್ಟಿಯವರು ಶಿವಾಧೀನರಾದರು. ಆರು ದಶಕಗಳಿಗೂ ಅಧಿಕ ಕಾಲ ಅವರು ನಿರಂತರವಾಗಿ ಸಾಹಿತ್ಯ-ಸಮಾಜದ ಅಭಿವೃದ್ಧಿಗಾಗಿ ದುಡಿದರು.